Thursday, 15 November 2012

ಅದ್ವೈತ





ಅದ್ವೈತ

ಹಂಸ - ಅದ್ವೈತದ ಪ್ರತೀಕ

ಅದ್ವೈತ ಸಿದ್ಧಾಂತ ಜಗತ್ತಿನ ಪ್ರಾಚೀನತಮ ಅದ್ವಯ (non-dualistic) ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು. 'ಅದ್ವೈತ' ಎಂದೊಡನೆ ಶ್ರೀ ಆದಿ ಶಂಕರಾಚಾರ್ಯರ ಹೆಸರು ಪ್ರಸ್ತಾಪಿಸಲ್ಪಡುತ್ತದೆ. ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿ ಕೊಟ

್ಟು, ಅದನ್ನು ದರ್ಶನದ ಮಟ್ಟಕ್ಕೆ ಕೊಂಡಯ್ದು ಪ್ರಚುರ ಪಡಿಸಿದವರು ಆದಿ ಶಂಕರರು. ಹಾಗೆಂದು ಶಂಕರರ ಮೊದಲು ಅದ್ವೈತ ಸಿದ್ಧಾಂತವಿರಲಿಲ್ಲವೆಂದಲ್ಲ. ಶಂಕರರು ಗೌಡಪಾದರ ಪರಂಪರೆಗೆ ಸೇರಿದ ಗೋವಿಂದ ಭಗವತ್ಪಾದರ ಶಿಷ್ಯರು. ಹಾಗಾಗಿ ಶಂಕರರಿಗಿಂತಲೂ ಮೊದಲು ಅದ್ವೈತ ಸಿದ್ಧಾಂತವು ಉದಯಿಸಿತ್ತೆಂದೂ, ಈ ಪರಂಪರೆಯಲ್ಲಿ ಅನೇಕ ಆಚಾರ್ಯರುಗಳು ಆಗಿಹೋಗಿದ್ದರೆಂದೂ ಹೇಳಬಹುದಾಗಿದೆ.
'ಅದ್ವೈತ'ವೆಂದರೆ ಎರಡಿಲ್ಲದ್ದು. ಅಂದರೆ 'ಒಂದೇ' ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೇ ಆಗಿರುವುದೆಂದು ಅದರ ಸಾರ. ಈ ರೀತಿಯ ಭೇದವನ್ನು ತಿರಸ್ಕರಿಸಿರುವ ಕಾರಣ ಈ ಸಿದ್ಧಾಂತವನ್ನು ಅಭೇದ ಸಿದ್ಧಾಂತವೆಂದೂ ಕರೆಯಲಾಗುತ್ತದೆ.

೧ ಮಾಯಾವಾದ - ಅವಿದ್ಯೆ
೨ ಮಿಥ್ಯಾವಾದ
೩ ಅಧ್ಯಾಸ - ಸತ್ತಾ ತ್ರೈವಿಧ್ಯ
೪ ಜ್ಞಾನಮಾರ್ಗ
೫ ಮಹಾವಾಕ್ಯಗಳು

ಮಾಯಾವಾದ - ಅವಿದ್ಯೆ

ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಪ್ರಮುಖ ಅಂಗ 'ಮಾಯಾವಾದ'.
ಸತ್ ಚಿತ್ ಸ್ವರೂಪಿಯಾದ ಆತ್ಮನೇ ಬ್ರಹ್ಮ. ಆದರೆ ಬ್ರಹ್ಮ ವಸ್ತುವಿನೊಡನೆ ಇರುವ ತಾದಾತ್ಮ್ಯವನ್ನು ಗುರುತಿಸಲು ಸಾಧ್ಯವಾಗದಂತೆ ಜಗತ್ತನ್ನು ಮಾಯೆಯು ಆವರಿಸಿದೆ. ಮಾಯೆಯ ಆವೃತ್ತಿಯು ಎಷ್ಟು ಘನವಾದುದೆಂದರೆ ಅದರ ಅಸ್ತಿತ್ವವೇ ಅನುಭವಕ್ಕೆ ಬರದಟ್ಟು. ಮಾಯೆಯ ಸಂಸರ್ಗದಿಂದಾಗಿ ಲೋಕದಲ್ಲಿ ಭಿನ್ನತೆಗಳೂ, ಭೇದಗಳೂ ಕಾಣಿಸತೊಡಗುತ್ತವೆ. ಮಾಯೆಯು ಲೌಕಿಕ ಜಗತ್ತಿನಲ್ಲಿ ತನ್ನನ್ನು ತಾನೇ ಅನೇಕ ರೂಪಾಂತರಗಳಾಗಿ ಮಾರ್ಪಡಿಸಿಕೊಳ್ಳುತ್ತದೆ. ಜೀವಿಗಳಲ್ಲಿರುವ ಭೇದವೂ, ಹೆಣ್ಣು - ಗಂಡುಗಳೆಂಬ ಭೇದವೂ, ಪ್ರಾಣಿ - ಪಕ್ಷಿಗಳೆಂಬ ಪ್ರಭೇದಗಳೂ, ಗಿಡ - ಮರಗಳೂ, ನಿರ್ಜೀವ ವಸ್ತುಗಳೂ - ಹೀಗೆ ಜಗತ್ತಿನಲ್ಲಿ ಕಾಣ ಸಿಗುವ ಎಲ್ಲ ರೀತಿಯ ಭಿನ್ನತೆಗಳೂ ಮಾಯೆಯಿಂದ ಉಂಟಾದವು. ಈ ಮಾಯೆಯಿಂದಾಗಿ ಸಾಧಾರಣ ಜೀವಿಗೆ ತನ್ನ ಕಣ್ಣು ಮೊದಲಾದ ಇಂದ್ರಿಯಗಳ ಮೂಲಕ ಲೋಕದಲ್ಲಿನ ಈ ಭಿನ್ನತೆಗಳೇ ವಸ್ತುವಿನ ನಿಜ ಸ್ವರೂಪವೆಂದು ಭಾಸವಾಗುತ್ತದೆ. ಆದರೆ ವಸ್ತುತ: ಇವೆಲ್ಲವೂ ಮೂಲ ಬ್ರಹ್ಮದ ಸ್ವರೂಪವೇ ಆಗಿರುವ ವಿಚಾರವನ್ನು ಆತ್ಮದ ಅರಿವಿಗೆ ಬರದಂತೆ ಮಾಯೆಯು ತಡೆಯೊಡ್ಡುತ್ತದೆ. ಯಾವುದು ವಾಸ್ತವದಲ್ಲಿ ಇಲ್ಲವೇ ಇಲ್ಲವೋ ಅದು ಇರುವಂತೆ ಭಾಸವಾಗುವುದು ಮಾಯೆಯ ಪ್ರಭಾವದಿಂದಾಗಿ.
ಸತ್ಯವನ್ನು ಮಾಯೆಯ ಆವರಣವು ಆವರಿಸಿಕೊಂಡಿದೆ. ಮಾಯೆಯ ಘನಸ್ವರೂಪವು ಇಡೀ ಸತ್ಯವನ್ನು ಕಾಣದಂತೆ ತೆರೆ ಹಿಡಿದಿರುತ್ತದೆ. ಪ್ರತಿ ಮಾನವನೂ ತನ್ನ ಸುತ್ತಲಿನ ಜಗತ್ತಿನಲ್ಲಿ ಅನೇಕತೆಯನ್ನು ಕಾಣುವಂತೆ ಮಾಡುತ್ತದೆ ಮಾಯೆ. ಸತ್ಯವನ್ನರಿಯಲಾಗದ ಮಾನವನು ಈ ಜಗತ್ತಿನಲ್ಲಿ ನಾನು, ನನ್ನದು ಎಂದು ಸ್ವಂತಿಕೆಯನ್ನು, ಅಹಂಕಾರವನ್ನೂ ಬೆಳೆಸಿಕೊಳ್ಳುತಾನೆ. ಇದೇ ಅವಿದ್ಯೆ. 'ಅದ್ವೈತ ಅಂದರೆ ಎರಡನೆಯದಿಲ್ಲದ್ದು. ಇದು ಶಂಕರರು ಸ್ಥಾಪಿಸಿದ್ದಲ್ಲ. ಅದ್ವೈತ ಪದವು ಮಾಂಡೂಕ್ಯ ಉಪನಿಷತ್ತಿನ ಮಂತ್ರದಲ್ಲಿ ಹೀಗಿದೆ - ’ನಾಂತಃ ಪ್ರಜ್ಞಮ್ ನ ಬಹಿಷ್ಪ್ರಜ್ಞಮ್ ನೋಭಯತಃ ಪ್ರಜ್ಞಮ್---- ಶಾನ್ತಮ್ ಶಿವಮ್ ಅದ್ವೈತಮ್ ಚತುರ್ಥಮ್ ಮನ್ಯನ್ತೇ ಸ ಆತ್ಮಾ ಸವಿಜ್ಞೇಯಃ ||’ ಎಂದು ತಿಳಿಸುತ್ತಿದೆ. ಶಂಕರರು ಇದನ್ನು ತೋರಿಸಿಕೊಟ್ಟಿದ್ದಾರೆ. ಅವರು ಅದ್ವೈತಮತ ಸ್ಥಾಪನಾಚಾರ್ಯರಲ್ಲ. ಮತ ಎಂದರೆ ಒಬ್ಬರ ಅಭಿಪ್ರಾಯ. ಶಂಕರರು ತೋರಿಸಿರುವ ತತ್ತ್ವ ಸಾರ್ವತ್ರಿಕ ಪರಿಪೂರ್ಣಾನುಭವದಮೆಲೆ ನಿಂತಿದೆ. ಭಗವಾನ್ ಶಂಕರರ ಜೀವನ ಚರಿತ್ರೆ ಭಾರತದಲ್ಲಿ ೧೯ ಬೇರೆ ಬೇರೆ ಶಂಕರ ವಿಜಯಗಳಲ್ಲಿ ಪ್ರಸ್ಥಾಪಿತವಾಗಿರುವುದು ಸರಿಯಷ್ಟೆ. ನಮಗೆ ಮಹಾತ್ಮರ ಜೀವನ ಚರಿತ್ರೆಗಿಂತ ಅವರು ಏನು ಹೇಳಿದ್ದಾರೆ, ಅವರ ಕಾರ್ಯಗಳೇನು, ಅದು ನಮಗೆಷ್ಟು ಉಪಯೋಗವಾಗಿದೆ, ಇಂದಿಗೂ ಲಭ್ಯವೆ ? ಎನ್ನುವುದು ಮುಖ್ಯ. ಮುಖ್ಯವಾಗಿ ಶಂಕರರು ಪ್ರಸ್ಥಾನತ್ರಯಗಳಿಗೆ ( ಬಾದರಾಯಣಾಚಾರ್ಯರ ಬ್ರಹ್ಮ ಸೂತ್ರಗಳು, ಶ್ರೀಮದ್ಭಗವದ್ಗೀತೆ, ದಶ ಉಪನಿಷತ್ತುಗಳು) ಪದ( ವ್ಯಾಕರಣ ) ವಾಕ್ಯ( ಮೀಮಾಂಸಾ) ಪ್ರಮಾಣ ( ನ್ಯಾಯ ದರ್ಶನ ) ಗಳಿಂದ ಭಾಷ್ಯವನ್ನು ಮೂಲ ಸಂಸ್ಕೃತದಲ್ಲಿ ಬರೆದಿದ್ದು, ಕರ್ಣಾಟಕ ಶಂಕರರೆಂದು ಪ್ರಸಿದ್ಧವಾಗಿರುವ ಹೊಳೆನರಸಿಪುರದ ಪರಮಪುಜ್ಯ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ೧೨೦೦ ವರ್ಷಗಳ ನಂತರ ಮೊಟ್ಟ ಮೊದಲು ಯಥಾವತ್ ಅಚುಕಟ್ಟಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಭಗವಾನ್ ಶಂಕರರಂತೆ ನಮ್ಮೆಲ್ಲರ ದುಃಖಗಳಿಗೂ ಅಜ್ಞಾನವೇ( ಜ್ಞಾನಾಭಾವ, ಸಂಶಯ ಜ್ಞಾನ, ವಿಪರೀತ ಜ್ಞಾನ) ಕಾರಣ. ಇದು ಪ್ರತ್ಯಯರೂಪ ( ಮಾನಸಿಕ). ಅದ್ವೈತತತ್ತ್ವವನ್ನು ಸಕಲ ಮಾನವರೂ ಅರ್ಥಮಾಡಿಕೊಳ್ಳಬಹುದು, ಇದಕ್ಕೆ ಜಾತಿ, ಮತ, ಲಿಂಗ, ದೇಶ ಇವುಗಳ ಪರಿಮಿತಿ ಇಲ್ಲ. ಬ್ರಹ್ಮ ಸತ್ಯಮ್ ಜಗನ್ಮಿಥ್ಯಾ -ಎಂಬುದು ವೇದದ ವಾಕ್ಯವಲ್ಲ ಹಾಗೂ ಶಂಕರರು ಹೇಳಿಲ್ಲ. ಇದು ವೇದಾನ್ತ ಡಿಂಡಿಮ ಎಂಬ ಶ್ಲೋಕದ ವಾಕ್ಯ. ಜಗನ್ಮಿಥ್ಯಾ ಎಂದರೆ ’ಜಗತ್ತು ತೋರುವ ರೂಪದಿಂದಿಲ್ಲ ’ ಉದಾ- ಹೆಸರು ಮೇಜು, ಕುರ್ಚಿ, ಬಾಗಿಲು.. ಇರುವುದು ಮರವೇ. ಇತ್ಯಾದಿ. ಅದೇರೀತಿ ಇರುವುದು ಮನುಷ್ಯರು,ಪ್ರಾಣಿಗಳು..ಇರುವುದು ಚರ್ಮ, ಮಾಂಸ, ಮೂಳೆ,ರಕ್ತ..ಇತ್ಯಾದಿ. ಹೆಸರುಗಳು ಅನೇಕ ತತ್ತ್ವ ಒಂದೇ. ಆತ್ಮನು ಸತ್ತಮೇಲೆ ಬ್ರಹ್ಮ ಆಗುವುದಿಲ್ಲ ತಿಳಿದಿರಲಿ ತಿಳಿಯದಿರಲಿ ಇರುವುದೇ ಬ್ರಹ್ಮ ಸ್ವರೂಪ. ವೇದಾಂತದ ಸಂದೇಶಗಳು ಅರ್ಥವಾಗಲು , ಅನುಭವಕ್ಕೆ ಬರಲು ೪ ಯೋಗ್ಯತೆಗಳು ಬೇಕೇ ಬೇಕು- ೧. ನಿತ್ಯಾನಿತ್ಯ ವಸ್ತುವಿವೇಕ, ೨. ಇಲ್ಲಿನ ಮತ್ತು ಪರಲೋಕದ ಫಲ, ಭೋಗಗಳಲ್ಲಿ ವಿರಾಗ, ೩. ಶಮಾದಿ ಸಾಧನ ಸಂಪತ್ತು, ಮತ್ತು ೪. ಮುಮುಕ್ಷುತ್ವ( ನನ್ನ ನಿಜ ಸ್ವರೂಪವನ್ನು ಹೇಗಾದರೂ ತಿಳಿಯಲೇಬೇಕು ಎಂಬ ತವಕ).

ಮಿಥ್ಯಾವಾದ

ಹಾಗಾಗಿ ಬ್ರಹ್ಮ ವಸ್ತುವೊಂದೇ ಸತ್ಯವಾದುದು. ಉಳಿದುದೆಲ್ಲವೂ ಮಿಥ್ಯೆ ಎಂಬುದು ಇದರ ಸಾರ. ವಾಸ್ತವದಲ್ಲಿ ಇಂದ್ರಿಯಗಳಿಗೆ ಗೋಚರವಾಗುವ ಈ ಜಗತ್ತೇ ಮಿಥ್ಯೆ. ಮಾಯೆಯ ಆಟದಿಂದಾಗಿ ವಿಧ ವಿಧವಾಗಿ ಗೋಚರಿಸುವ ಜಗತ್ತಿನ ವಸ್ತುಗಳಿಗೆ ವಾಸ್ತವದಲ್ಲಿ ಪ್ರತ್ಯೇಕ ಅಸ್ತಿತ್ವವೇ ಇಲ್ಲ. ಮಾಯೆಯಿಂದ ಉಂಟಾದ ಈ ಭ್ರಮೆಯ ಮೇಲೆ ಮಾನವನ ಸಂಸಾರ ನಿಂತಿದೆ. ಹುಟ್ಟು, ಸಾವು, ಸಂಬಂಧಗಳು, ಸಂಸರ್ಗಗಳು ,ವಿಯೋಗಗಳು, ಸುಖ, ದು:ಖ, ನೋವು, ನಲಿವು - ಇವೆಲ್ಲವೂ ಈ ಭ್ರಮೆಯಿಂದುಟಾಗುವ ಮನೋ ವಿಕಾರಗಳು. ಮಾಯೆಯಿಂದುಂಟಾದ ಈ ಮಿಥ್ಯ ಜಗತ್ತಿನಲ್ಲಿ ನಾವು ನಿತ್ಯ ಅನುಭವಿಸುವ ನೋವು, ನಲಿವುಗಳೆಲ್ಲವೂ ನಿಜವಾದುವೆಂಬ ಭ್ರಮೆಯಲ್ಲಿರುವ ಮಾನವನು ಈ ಮಿಥ್ಯ ಜಗತ್ತಿನಲ್ಲಿ ಸುಖ ಕಂಡುಕೊಳ್ಳುವುದೇ ಪರಮ ಪುರುಷಾರ್ಥ ಎಂದು ತಿಳಿದಿರುತ್ತಾನೆ.

ಅಧ್ಯಾಸ - ಸತ್ತಾ ತ್ರೈವಿಧ್ಯ

ಮಾಯೆಯು ನಿಜವೂ ಹೌದು, ನಿಜವಲ್ಲದ್ದೂ ಹೌದು. ವ್ಯಾವಹಾರಿಕ ಜಗತ್ತಿನಲ್ಲಿ ಮಾಯೆಯು ಇರುವ ಕಾರಣ, ಮಾಯೆಯನ್ನು ಪೂರ್ಣತಃ ಸುಳ್ಳೆನ್ನಲಾಗುವುದಿಲ್ಲ. ಆದರೆ ಅದ್ವೈತದ ಜ್ಞಾನವುಂಟಾದ ಮೇಲೆ, ಈ ಮಾಯೆಯು ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ, ಮಾಯೆಯು ಪರಮ ಸತ್ಯವಾಗಲಾರದು. ಹಾಗಾಗಿ ಶಂಕರರು ಮಾಯೆಯ ಸ್ವರೂಪವನ್ನು ವಿವರಿಸುವಾಗ 'ಅಧ್ಯಾಸ'ವನ್ನು ವಿವರಿಸುತ್ತಾರೆ. ಅಧ್ಯಾಸವೆಂದರೆ ಒಂದು ಇನ್ನೊಂದರ ಮೇಲೆ ಆರೋಪಗೊಳ್ಳುವುದು (Superimposition). ಮಾಯೆಯಿಂದುಟಾದ ಈ ಅಧ್ಯಾಸದಿಂದಾಗಿ ಜಗತ್ತಿನಲ್ಲಿ ಪರಬ್ರಹ್ಮ ವಸ್ತುವು ನಾನಾ ರೂಪಗಳಲ್ಲಿಯೂ ನಾನಾ ವಿಧಗಳಲ್ಲಿಯೂ ಕಂಡುಬರುತ್ತದೆ. ಈ ಅಧ್ಯಾಸದಿಂದಾಗಿ ನಿಜ ಪರಬ್ರಹ್ಮ ವಸ್ತುವಿನ ಬಗ್ಗೆ ತಿಳಿದುಕೊಳ್ಳಲು ತೊಡಕಾಗಿರುತ್ತದೆ. ಹಾಗಾಗಿ ಜಗತ್ತಿನಲ್ಲಿ ಕಾಣುವ ವಸ್ತು ಬಾಹುಳ್ಯವೇ ಸತ್ಯವಾದುದೆಂದು ಗೋಚರವಾಗುತ್ತದೆ.
ಅಧ್ಯಾಸದಿಂದಾಗಿ ಸತ್ಯವು ಪೂರ್ಣವಾಗಿ ಗೋಚರವಾಗುವುದಿಲ್ಲ. ಇದರಿಂದಾಗಿ ವಿವಿಧ ಸ್ತರಗಳಲ್ಲಿ ಸತ್ಯವು ವಿಧ ವಿಧವಾಗಿ ಗೋಚರವಾಗುತ್ತದೆ. ಹೀಗೆ ಮೂರು ವಿಧದ ಸತ್ತೆಯ ಸ್ತರ (ಸತ್ತಾ ತ್ರೈವಿಧ್ಯ) ಗಳನ್ನು ಗುರುತಿಸಲಾಗುತ್ತದೆ. ಇದನ್ನು ವಿವರಿಸಲು ಸಾಮಾನ್ಯವಾಗಿ 'ಹಗ್ಗ ಮತ್ತು ಹಾವಿನ' ( ರಜ್ಜು - ಸರ್ಪ ನ್ಯಾಯ ) ಉದಾಹರಣೆಯನ್ನು ಕೊಡಲಾಗುತ್ತದೆ.
ಅನೇಕ ಬಾರಿ ಬೆಳಕಿನ ಅಭಾವದಿಂದಾಗಿ, ಅಥವಾ ಇನ್ನಿತರ ಕಾರಣಗಳಿಂದಾಗಿ, ನೆಲದ ಮೇಲೆ ಬಿದ್ದಿರುವ ಹಗ್ಗದ ಚೂರೊಂದು, ಹಾವಿನಂತೆ ಮನಸ್ಸಿಗೆ ಭಾಸವಾಗುತ್ತದೆ. ಹೀಗೆ ಈ ಸಂದರ್ಭದಲ್ಲಿ, ಹಾವು ಹಗ್ಗದ ಮೇಲೆ ಅಧ್ಯಾಸಗೊಂಡಿದ್ದು, ಹಗ್ಗವು ಹಾವಿನಂತೆ ಗೋಚರವಾಗಿದೆ. ಆದರೆ ವಸ್ತುತಃ ಅಲ್ಲಿ ಹಾವು ಇರುವುದಿಲ್ಲ. ಅದು ಹಗ್ಗ ಮಾತ್ರ, ಎಂಬ ಜ್ಞಾನವುಂಟಾದ ಒಡನೆಯೇ ಹಾವಿನ ಚಿತ್ರವು ಮನಸ್ಸಿನಿಂದ ಮಾಯವಾಗಿ, ಹಗ್ಗ ಮಾತ್ರ ಉಳಿಯುತ್ತದೆ. ಈ ರೀತಿ ಜಗತ್ತಿನಲ್ಲಿ ದೈನಂದಿನ ಜೀವನದಲ್ಲಿಯೇ ಸಂದರ್ಭಾನುಸಾರವಾಗಿ, ಅನೇಕ ವಸ್ತುಗಳು ಇತರ ಇನ್ನಾವುದೋ ವಸ್ತುಗಳೆಂದು ಭಾಸವಾಗುತ್ತವೆ. ಇದನ್ನು 'ಪ್ರಾತಿಭಾಸಿಕ ಸತ್ತೆ' ಎಂದು ಕರೆಯಲಾಗುತ್ತದೆ.
ಆದರೆ ಹಗ್ಗದ ಅಸ್ತಿತ್ವವೂ ಕೂಡ ಸತ್ಯವಾದುದಲ್ಲ. ಮಾಯೆಯ ಅಧ್ಯಾಸದಿಂದಾಗಿ, ಪರಬ್ರಹ್ಮ ವಸ್ತುವು, ಹಗ್ಗವೂ ಸೇರಿದಂತೆ ಜಗತ್ತಿನ ವಿವಿಧ ವಸ್ತುಗಳಾಗಿ ಗೋಚರಿಸುತ್ತದೆ. ಇದನ್ನು 'ವ್ಯಾವಹಾರಿಕ ಸತ್ತೆ' ಎಂದು ಕರೆಯಲಾಗುತ್ತದೆ.
ಪರಬ್ರಹ್ಮನ ಜ್ಞಾನವುಂಟಾದ ಒಡನೆಯೇ, ಈ ಹಗ್ಗ ಹಾಗೂ ಜಗತ್ತಿನ ವಿವಿಧತೆಗಳ ಚಿತ್ರವು ಮಾಯವಾಗಿ ಪರಬ್ರಹ್ಮನ ಸರ್ವ ವ್ಯಾಪಕತ್ವವು ಗೋಚರವಾಗುತ್ತದೆ. ಹಾಗಾಗಿ ಬ್ರಹ್ಮ ವಸ್ತುವೊಂದೇ ಪರಮ ಸತ್ಯವಾದುದು. ಮಾಯೆ ಹರಿದ ಒಡನೆಯೇ ಈ ಅದ್ವೈತದ, ಪರಮ ಸತ್ಯದ ಅರಿವುಂಟಾಗುತ್ತದೆ. ಇದನ್ನೇ 'ಪಾರಮಾರ್ಥಿಕ ಸತ್ತೆ' ಎನ್ನಲಾಗುತ್ತದೆ.

ಜ್ಞಾನಮಾರ್ಗ

ಈ ಮಿಥ್ಯೆಯ ಅರಿವಾಗಿ ಸತ್ಯದ ಜ್ಞಾನವನ್ನು ಪಡೆಯುವುದೇ ಜೀವಿತದ ಉದ್ದೇಶವಾಗಿರತಕ್ಕದ್ದು. ವೇದಗಳ ಪೂರ್ವಕಾಂಡದಲ್ಲಿ ಉಲ್ಲೇಖವಿರುವ ಯಜ್ಞ, ಯಾಗ, ಹೋಮ, ಆಹ್ನಿಕ, ದೇವತೋಪಾಸನೆ ಮುಂತಾದ ಕರ್ಮಗಳೆಲ್ಲವೂ ಸಹ ಈ ಜ್ಞಾನ ಪ್ರಾಪ್ತಿಯ ಮಾರ್ಗದಲ್ಲಿ ಸಾಧನಗಳಷ್ಟೆ. ಪರಮ ಸಾಧನೆಗೆ ಈ ಎಲ್ಲ ವಿಹಿತ ಕರ್ಮಗಳೂ ಮೆಟ್ಟಿಲುಗಳಾಗಬೇಕು. ಆದರೆ ಪೂರ್ವಮೀಮಾಂಸಕರು ಪ್ರತಿಪಾದಿಸುವಂತೆ, ಇವೇ ಜೀವಿತದ ಉದ್ದೇಶವಲ್ಲ.
ಮಾಯೆಯನ್ನು ಕಳಚಿ ಬ್ರಹ್ಮ ವಸ್ತುವಿನೊಡನೆ ಇರುವ ತಾದಾತ್ಮ್ಯ ಸತ್ಯ ಜ್ಞಾನದ ಪ್ರಾಪ್ತಿಯೇ ಪರಮ ಪುರುಷಾರ್ಥವು. ಬ್ರಹ್ಮನೂ ತಾನೂ ಒಂದೇ ಎಂಬ ಜ್ಞಾನವುಂಟಾಗಿ ಸಚ್ಚಿದಾನಂದವನ್ನು ಅನುಭವಿಸುವ ಸ್ಥಿತಿಯೇ ವೇದಗಳು ಉಪದೇಶಿಸಿರುವ 'ಮೋಕ್ಷ ಸ್ಥಿತಿ'. ಈ ಅಭೇದ ಜ್ಞಾನವುಂಟಾದ ಮೇಲೆ, ಆತ್ಮವೆಂದಿಗೂ ಸಂಸಾರದ ಬಂಧನದೊಳಗೆ ಮತ್ತೆ ಸುಳಿಯಲಾರದು. ಇನ್ನೆಂದಿಗೂ ಹಿಂದೆ ಮರಳಲಾರದಂತಹ ದಿವ್ಯ ಸ್ಥಿತಿಯಿದು. ಹಾಗಾಗಿ ಮೋಕ್ಷ ಹೊಂದುವುದಕ್ಕೆ ಈ ಅದ್ವೈತ ಜ್ಞಾನ ಪ್ರಾಪ್ತಿಯೊಂದೇ ಮಾರ್ಗ.

ಮಹಾವಾಕ್ಯಗಳು
ವೇದಗಳು ಬ್ರಹ್ಮಾತ್ಮೈಕ್ಯವನ್ನು ಪ್ರತಿಪಾದಿಸುತ್ತವೆ ಎಂಬುದನ್ನು ಈ ಕೆಳಗಿನ ನಾಲ್ಕು ಮಹಾವಾಕ್ಯಗಳಿಂದ ಹೇಳಲಾಗುತ್ತದೆ. ಒಂದೊಂದು ವಾಕ್ಯವನ್ನೂ ಒಂದೊಂದು ವೇದದ ಉಪನಿಷತ್ತಿನಿಂದ ಆರಿಸಲಾಗಿದೆ.

೧. प्रज्ञानम ब्रह्म (ಪ್ರಜ್ಞಾನಮ್ ಬ್ರಹ್ಮ) "ಪ್ರಜ್ಞಾನವು ಬ್ರಹ್ಮವು" ಐತರೇಯ ಉಪನಿಷತ್ ಋಗ್ವೇದ
೨. अहम ब्रह्मास्मि (ಅಹಮ್ ಬ್ರಹ್ಮಾಸ್ಮಿ) "ನಾನು ಬ್ರಹ್ಮನಾಗಿರುವೆ" ಬೃಹದಾರಣ್ಯಕ ಉಪನಿಷತ್ ಯಜುರ್ವೇದ
೩. तत्त्त्वमसि (ತತ್ತ್ವಮಸಿ) "ಅದು ನೀನು ಆಗಿರುವೆ" ಛಾಂದೋಗ್ಯ ಉಪನಿಷತ್ ಸಾಮವೇದ
೪. अयमात्मा ब्रह्म (ಅಯಮಾತ್ಮಾ ಬ್ರಹ್ಮ) "ಈ ಆತ್ಮವು ಬ್ರಹ್ಮವು" ಮಾಂಡುಕ್ಯ ಉಪನಿಷತ್ ಅಥರ್ವವೇದ

No comments:

Post a Comment