Monday, 14 January 2013

ಭಗವದ್ಗೀತೆ ಅಧ್ಯಾಯ - 4

  • ಶ್ಲೋಕ - 01

    ಹಿಂದೆ ಕೃಷ್ಣ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಎರಡನೇ ಅಧ್ಯಾಯದಲ್ಲಿ ಪ್ರಸ್ತಾಪಿಸಿ, ಆ ನಂತರ ಮೂರನೇ ಅಧ್ಯಾಯದಲ್ಲಿ ಕರ್ಮಯೋಗದ ವಿಸ್ತಾರವನ್ನು ತಿಳಿಸಿದ. ನಾಲ್ಕನೇ ಅಧ್ಯಾಯದಲ್ಲಿ ಭಗವಂತನ ಜ್ಞಾನದ ಅರಿವಿನ ಮುಖ ಮತ್ತು ಕರ್ಮದ ಪ್ರಭೇದಗಳನ್ನು ಕೃಷ್ಣ ವಿವರಿಸುತ್ತಾನೆ. ಹಿಂದೆ ಹೇಳಿದ ಜ್ಞಾನಯೋಗ ಮತ್ತು ಕರ್ಮಯೋಗವನ್ನೇ ವಿಸ್ತರಿಸಿ ಜ್ಞಾನದ ಮಹತ್ವ ಮತ್ತು ಕರ್ಮದ ಪ್ರಭೇದಗಳ ಜೊತೆಗೆ ಈ ಎರಡು ಮಾರ್ಗದಿಂದ ನಾವು ಪಡೆಯತಕ್ಕಂತಹ ಭಗವಂತನ ಮಹಿಮೆ- ಇದನ್ನು ಈ ಅಧ್ಯಾಯದಲ್ಲಿ ಕಾಣಬಹುದು. ಈ ಅಧ್ಯಾಯ ಕೃಷ್ಣನ ಮಾತಿನೊಂದಿಗೆ ಆರಂಭವಾಗುತ್ತದೆ.
    ಭಗವಾನುವಾಚ ।
    ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್ ।
    ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇSಬ್ರವೀತ್ ॥೧॥

    ಭಗವಾನ್ ಉವಾಚ-ಭಗವಂತ ಹೇಳಿದನು : ಇಮಮ್ ವಿವಸ್ವತೇ ಯೋಗಮ್ ಪ್ರೋಕ್ತವಾನ್ ಅಹಮ್ ಅವ್ಯಯಮ್ |
    ವಿವಸ್ವಾನ್ ಮನವೇ ಪ್ರಾಹ ಮನುಃ ಇಕ್ಷ್ವಾಕವೇ ಅಬ್ರವೀತ್ -ಅಳಿವಿರದ ಈ ಸಾಧನ ಮಾರ್ಗವನ್ನು ನಾನು ಸೂರ್ಯನಿಗೆ ಹೇಳಿದ್ದೆ. ಸೂರ್ಯ ಮನುವಿಗೆ ಹೇಳಿದ್ದ. ಮನು ಇಕ್ಷ್ವಾಕುವಿಗೆ ಹೇಳಿದ್ದ.

  • ಶ್ಲೋಕ - 02

    ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋವಿದುಃ ।
    ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ ॥೨॥

    ಏವಮ್ ಪರಂಪರಾ ಪ್ರಾಪ್ತಮ್ ಇಮಮ್ ರಾಜ ಋಷಯಃ ವಿದುಃ |
    ಸಃ ಕಾಲೇನ ಇಹ ಮಹತಾ ಯೋಗಃ ನಷ್ಟಃ ಪರಂತಪ-ಹೀಗೆ ಒಬ್ಬರಿಂದ ಒಬ್ಬರಿಗೆ ಹರಿದು ಬಂದಿರುವ ಇದನ್ನು ಜ್ಞಾನಿಗಳಾದ ಅರಸರು ಅರಿತಿದ್ದರು. ಓ ಅರಿಗಳನ್ನು ತರಿದವನೆ, ತುಂಬ ಕಾಲದ ಬಳಿಕ ಆ ಅರಿವಿನ ದಾರಿ ಈ ನೆಲದಲ್ಲಿ ಕಣ್ಮರೆಯಾಯಿತು.

  • ಶ್ಲೋಕ - 03

    ಸ ಏವಾಯಂ ಮಯಾ ತೇSದ್ಯ ಯೋಗಃ ಪ್ರೋಕ್ತಃ ಪುರಾತನಃ।
    ಭಕ್ತೋsಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್ ॥೩॥

    ಸಃ ಏವ ಅಯಮ್ ಮಯಾ ತೇ ಅದ್ಯ ಯೋಗಃ ಪ್ರೋಕ್ತಃ ಪುರಾತನಃ |
    ಭಕ್ತಃ ಅಸಿ ಮೇ ಸಖಾ ಚ ಇತಿ ರಹಸ್ಯಮ್ ಹಿ ಏತತ್ ಉತ್ತಮಮ್-ಅದೇ ಹಳೆಯ ಅರಿವಿನ ದಾರಿಯನ್ನು ನಾನೀಗ ನಿನಗೆ ಹೇಳಿದೆ -ನೀನು ನನ್ನ ಭಕ್ತ ಮತ್ತು ಗೆಳೆಯ ಎನ್ನುವುದಕ್ಕಾಗಿ. ಇದು ತುಂಬ ರಹಸ್ಯವಾದ ಹಿರಿಯ ಸಂಗತಿ.

    ಈ ಮೇಲಿನ ಮೂರು ಶ್ಲೋಕದಲ್ಲಿ ಸೃಷ್ಟಿಯ ಆದಿಯಿಂದ ಈ ಜ್ಞಾನದ ಪರಂಪರೆ ಹೇಗೆ ಬೆಳೆದು ಬಂತು ಎನ್ನುವ ಚಿತ್ರಣವನ್ನು ಕೃಷ್ಣ ಕೊಟ್ಟಿದ್ದಾನೆ. ವಾಸ್ತವಿಕವಾಗಿ ಜ್ಞಾನದ ಮೂಲ ವೇದಗಳು. ವೇದದ ಸಾರವನ್ನು ಸಂಗ್ರಹ ಮಾಡಿ, ಸಮಸ್ತ ವೇದಾರ್ಥ ಸಂಗ್ರಹವಾದಂತಹ ಒಂದು ಗ್ರಂಥ ರಚನೆಯಾಯಿತು. ಅದನ್ನು ಪಂಚರಾತ್ರ ಎಂದು ಕರೆದರು. ಪಂಚರಾತ್ರ ಅನ್ನುವುದು ವೈದಿಕ ವಾಗ್ಮಯದ ಜ್ಞಾನಯೋಗ ಮತ್ತು ಕರ್ಮಯೋಗಗಳ ಸಮಷ್ಠಿರೂಪವಾಗಿರುವಂತಹ ಗ್ರಂಥ. ಆ ಪಂಚರಾತ್ರದ ಸಾರಸಂಗ್ರಹವೇ ಭಗವದ್ಗೀತೆ. ಸೃಷ್ಟಿಯ ಆದಿಯಲ್ಲಿ, ಸ್ವಾಯಂಭುವ ಮನ್ವಂತರದಲ್ಲಿ ಭಗವಂತ ಪಂಚರಾತ್ರವನ್ನು ಚತುರ್ಮುಖನಿಗೆ ಉಪದೇಶಿಸಿದ. ಹೀಗೆ ಪ್ರಪಂಚ ಸೃಷ್ಟಿಯಾದ ಮೊದಲಲ್ಲೇ ಪಂಚರಾತ್ರದ ಜ್ಞಾನ ಚತುರ್ಮುಖನಿಗೆ ಹಾಗು ದೇವತೆಗಳಿಗೆ ಬಂತು. ಸೂರ್ಯ ವೈವಸ್ವತ ಮನ್ವಂತರದಲ್ಲಿ ಇದನ್ನು ತನ್ನ ಮಗನಾದ ಇಕ್ಷ್ವಾಕುವಿಗೆ ಹೇಳಿದ. ಇದನ್ನೇ ಕೃಷ್ಣ ಇಲ್ಲಿ ಅರ್ಜುನನನಿಗೆ ವಿವರಿಸುತ್ತಿದ್ದಾನೆ.

    ಮೊಟ್ಟ ಮೊದಲು ದೇವತೆಗಳು ಭಗವಂತನಿಂದ ಈ ಜ್ಞಾನವನ್ನು ಪಡೆದರು. ಈ ದೇವತೆಗಳಲ್ಲಿ ಸೂರ್ಯನೂ ಒಬ್ಬ. ಸೂರ್ಯ ಭೂಮಿಗೂ ದೇವತೆಗಳಿಗೂ ಸಂಪರ್ಕ ಕೊಡುವ ದೇವತೆ. ಈತನಿಂದ ವೈವಸ್ವತ ಮನ್ವಂತರದ ಅಭಿಮಾನಿಯಾದ ಮನುವಿಗೆ ಈ ಜ್ಞಾನ ಹರಿದು ಬಂತು. ಮನು ಇದನ್ನು ತನ್ನ ಮಗ ಇಕ್ಷ್ವಾಕುವಿಗೆ ಹೇಳಿದ. ಈತ ಭೂಲೋಕದಲ್ಲಿ ಚಕ್ರವರ್ತಿಯಾಗಿ ಬಾಳಿದ ಮಹಾ ರಾಜರ್ಷಿ. ಹೀಗೆ ಈ ಜ್ಞಾನ ದೇವತೆಗಳಿಂದ ಭೂಲೋಕಕ್ಕೆ ಹರಿದು ಬಂತು.

    ಜ್ಞಾನ ಎನ್ನುವುದು ಅನಾಧಿನಿತ್ಯ. ಇದು ಅಳಿವಿರದ ವಿದ್ಯೆ. ಪ್ರತೀ ಸೃಷ್ಟಿಯ ಆದಿಯಲ್ಲೂ ಈ ವಿದ್ಯೆ ಭಗವಂತನಿಂದ ಹೇಳಲ್ಪಡುತ್ತದೆ. ನಂತರ ದೇವತೆಗಳು, ದೇವತೆಗಳಿಂದ ರಾಜರ್ಷಿಗಳು, ನಂತರ ಋಷಿಗಳು ಹೀಗೆ ಜ್ಞಾನ ಪರಂಪರೆ ಬೆಳೆಯುತ್ತದೆ. ಇಂದು ಈ ರೀತಿ ಹರಿದು ಬಂದ ವಿದ್ಯೆ ಕಣ್ಮರೆಯಾಗುತ್ತಿದೆ; ಜನ ಮರೆಯುತ್ತಿದ್ದಾರೆ. ಮಹಾನ್ ಜ್ಞಾನಿಯಾದ ಅರ್ಜುನ ಕೂಡಾ ಈ ಜ್ಞಾನವನ್ನು ಮರೆತಿದ್ದಾನೆ. ಹಿಂದೆ ಹೇಳಿದಂತೆ ಅರ್ಜುನ ಆ ಕಾಲದ ಮಹಾನ್ ಜ್ಞಾನಿ. ಆದರೂ ಅದು ಆತನಿಗೆ ನೆನಪಿಗೆ ಬರುತ್ತಿಲ್ಲ. ಇಲ್ಲಿ ಕೃಷ್ಣ ಅರ್ಜುನನನ್ನು "ಪರಂತಪ" ಎಂದು ಸಂಬೋಧಿಸಿದ್ದಾನೆ. ಪರಂತಪ ಎಂದರೆ ಸದಾ ಭಗವಂತನನ್ನು ಜ್ಞಾನದ ದೃಷ್ಟಿಯಿಂದ ಕಾಣಬಲ್ಲವ. "ನೀನು ಅಪರೋಕ್ಷ ಜ್ಞಾನಿ; ನಿನ್ನಲ್ಲೇ ಆ ಜ್ಞಾನ ಪರಂಪರೆ ಇದೆ; ಆದರೂ ನಿನಗೆ ಸಂಶಯ ಬಂತು; ಈ ಅನಾಧಿನಿತ್ಯವಾದ ಜ್ಞಾನ ಪರಂಪರೆ ನಿನ್ನಲ್ಲೇ ಮರೆಯಾಗುತ್ತಿದೆ. ಹೀಗಿರುವಾಗ ಉಳಿದವರ ಪಾಡೇನು" ಎನ್ನುವ ಧ್ವನಿ ಈ ಪರಂತಪ ಎನ್ನುವ ಸಂಬೋಧನೆಯಲ್ಲಿದೆ.

    ಜ್ಞಾನ ನಾಶವಾಗಿಲ್ಲ, ಆದರೆ ಮೋಹದ ಪರದೆ ಅದನ್ನು ತಡೆದಿದೆ. ಆದ್ದರಿಂದ ನಿನಗೆ ನಾನು ಈಗ ಆ ಜ್ಞಾನವನ್ನು ಪುನಃ ಹೇಳುತ್ತಿದ್ದೇನೆ ಎನ್ನುತ್ತಾನೆ ಕೃಷ್ಣ. ಅರ್ಜುನ ಕೃಷ್ಣನ ಮೇಲಿಟ್ಟಿರುವ ಅಪಾರ ಗೌರವ, ಭಕ್ತಿ ಹಾಗು ಆತ್ಮೀಯತೆಯನ್ನು ಗುರುತಿಸಿ, ಅನಾದಿನಿತ್ಯವಾದ, ಅಪೂರ್ವವಾದ ಈ ಜ್ಞಾನವನ್ನು ಕೃಷ್ಣ ಅರ್ಜುನನಿಗೆ ನೆನಪಿಸುತ್ತಿದ್ದಾನೆ. ಅರ್ಜುನನ ಭಕ್ತಿ ನವವಿಧ ಭಕ್ತಿಯಲ್ಲಿ (ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ ,ಸಖ್ಯ ಹಾಗು ಆತ್ಮ ನಿವೇದನ) ಒಂದಾದ ಸಖ್ಯ. ಆತ ಭಗವಂತನನ್ನು ಗೆಳೆಯನಾಗಿ ಪೂಜಿಸಿದ. ಈ ಕಾರಣಕ್ಕಾಗಿ ಇಲ್ಲಿ ಕೃಷ್ಣ ಹೇಳುತ್ತಾನೆ: "ನೀನು ನನ್ನ ಭಕ್ತ ಮತ್ತು ಸಖ. ಆ ಕಾರಣಕ್ಕಾಗಿ ಈ ಅಮೂಲ್ಯವಾದ ಜ್ಞಾನವನ್ನು ನಿನಗೆ ಹೇಳಿದೆ" ಎಂದು.
    ಇಲ್ಲಿ ರಹಸ್ಯವಾದ ಜ್ಞಾನವನ್ನು ನಿನಗೆ ಹೇಳುತ್ತಿದ್ದೇನೆ ಎಂದು ಕೃಷ್ಣ ಹೇಳಿದ್ದಾನೆ. ಜ್ಞಾನವನ್ನು ರಹಸ್ಯವಾಗಿಡಲು ಎರಡು ಕಾರಣವಿದೆ. ಒಂದು ಅದರ ದುರುಪಯೋಗ ಹಾಗು ಇನ್ನೊಂದು ಅದರ ನಿರುಪಯೋಗ. ಯಾರು ಜ್ಞಾನವನ್ನು ಪಡೆದು ಅದನ್ನು ತಮ್ಮ ತಲೆಮಾರಿಗೆ ಕೊಡಲಾರರೋ ಅಂಥವರಿಗೆ ಜ್ಞಾನವನ್ನು ಕೊಡುವುದು ವ್ಯರ್ಥ. ಇದರಿಂದ ಜ್ಞಾನ ಪರಂಪರೆ ಹರಿದು ಬರಲಾರದು. ಇನ್ನು ದುರುಪಯೋಗ. ಜ್ಞಾನ ಇರುವುದು ನಮ್ಮ ಅಂತರಂಗದ ಉದ್ಧಾರಕ್ಕೆ ಹಾಗು ಇನ್ನೊಬ್ಬರ ಉದ್ಧಾರದ ದಾರಿ ತೋರುವುದಕ್ಕಾಗಿ. ಹೊರತು ವ್ಯವಹಾರ-ವ್ಯಾಪಾರ ಮಾಡುವುದಕ್ಕಾಗಿ ಅಲ್ಲ. ಜ್ಞಾನದಿಂದ ಸಮಾಜವನ್ನು ಮೋಸಗೊಳಿಸಬಹುದು. ತಿಳುವಳಿಕೆ ಇಲ್ಲದವರನ್ನು ತನ್ನ ತಿಳುವಳಿಕೆಯಿಂದ ಮೋಸ ಮಾಡಿ ವಂಚಿಸಬಹುದು. ಈ ಎಲ್ಲಾ ಕಾರಣದಿಂದ ಜ್ಞಾನ ರಹಸ್ಯ ವಿಷಯ. ಹಿಂದೆ ಯೋಗ ಸಿದ್ಧಿಯಿಂದ ಮಾಯವಾಗುವ ವಿದ್ಯೆ ಜ್ಞಾನಿಗಳಿಗೆ ತಿಳಿದಿತ್ತು. ಇಂತಹ ಅಮೂಲ್ಯ ವಿದ್ಯೆಯ ದುರುಪಯೋಗ ಅತೀ ಸುಲಭ. ಆ ಕಾರಣಕ್ಕಾಗಿ ಅದನ್ನು ರಹಸ್ಯವಾಗಿಟ್ಟರು. ಪ್ರಾಣಿ ಭಾಷೆಯನ್ನೂ ಅರ್ಥ ಮಾಡಿಕೊಳ್ಳುವ ವಿದ್ಯೆ ನಮ್ಮಲ್ಲಿತ್ತು. ಇದನ್ನೂ ಕೂಡಾ ರಹಸ್ಯವಾಗಿಟ್ಟರು. ಹೀಗೆ ಜ್ಞಾನದಿಂದ ದುರುಪಯೋಗವಾಗುವ ಸಾಧ್ಯತೆ ಇದ್ದಾಗ ಅದನ್ನು ರಹಸ್ಯವಾಗಿಡಬೇಕು. ಇಂಥ ರಹಸ್ಯವಾದ ವಿಷಯವನ್ನು ನಾನು 'ನಿನ್ನನ್ನು ಆಯ್ಕೆ ಮಾಡಿ ಹೇಳುತ್ತಿದ್ದೇನೆ' ಎಂದಿದ್ದಾನೆ ಕೃಷ್ಣ.


  • ಶ್ಲೋಕ - 04

    ಅರ್ಜುನ ಉವಾಚ ।
    ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ ।
    ಕಥಮೇತದ್ ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ ॥೪॥

    ಅರ್ಜುನಃ ಉವಾಚ-ಅರ್ಜುನ ಕೇಳಿದನು :ಅಪರಮ್ ಭವತಃ ಜನ್ಮ ಪರಮ್ ಜನ್ಮ ವಿವಸ್ವತಃ |
    ಕಥಮ್ ಏತತ್ ವಿಜಾನೀಯಾಮ್ ತ್ವಮ್ ಆದೌ ಪ್ರೋಕ್ತವಾನ್ ಇತಿ-ನೀನು ಹುಟ್ಟಿದ್ದು ಇತ್ತೀಚೆಗೆ. ಸೂರ್ಯ ಮೊದಲು ಹುಟ್ಟಿದವನು. ನೀನೇ ಮೊದಲು ಹೇಳಿದವನು ಎಂದರೆ ಇದನ್ನು ಹೇಗೆ ಅರ್ಥೈಸಲಿ?

    ಜ್ಞಾನ ಪರಂಪರೆಯನ್ನು ವಿವರಿಸುವಾಗ ಕೃಷ್ಣ "ನಾನು ಮೊದಲು ಸೂರ್ಯನಿಗೆ(ದೇವತೆಗಳಿಗೆ) ಹೇಳಿದೆ" ಎಂದಿದ್ದಾನೆ. ಇಲ್ಲಿ ಅರ್ಜುನ ಕೃಷ್ಣನನ್ನು ಈ ಕುರಿತು ಪ್ರಶ್ನಿಸುತ್ತಾನೆ. ಕೃಷ್ಣ ಅರ್ಜುನನಿಗಿಂತ ಸುಮಾರು ಆರು ತಿಂಗಳು ಹಿರಿಯ. ಹಾಗಿರುವಾಗ ಕೋಟಿ-ಕೋಟಿ ವರ್ಷಗಳ ಹಿಂದೆ ಸೂರ್ಯನಿಗೆ ಹೇಳಿದೆ ಅಂದರೆ ಇದನ್ನು ಹೇಗೆ ಅರ್ಥೈಸಲಿ ಎನ್ನುವುದು ಅರ್ಜುನನ ಪ್ರಶ್ನೆ.

    ಇಲ್ಲಿ ಅರ್ಜುನನಿಗೆ ಸ್ವಯಂ ಭಗವಂತನಿಂದ ಈ ಪ್ರಶ್ನೆಗೆ ಉತ್ತರ ಪಡೆಯುವ ಆಸೆ. ಅದಕ್ಕಾಗಿ ಈ ಪ್ರಶ್ನೆಯನ್ನು ಹಾಕಿದ್ದಾನೆ. ಇಷ್ಟೇ ಅಲ್ಲದೆ ಎಲ್ಲಾ ನರರ ಪ್ರತಿನಿಧಿಯಾಗಿ ನಿಂತ ಮಹಾಜ್ಞಾನಿ ಅರ್ಜುನ, ನಮ್ಮ ನಿಮ್ಮೆಲ್ಲರ ಪರ ಈ ಪ್ರಶ್ನೆಯನ್ನು ಹಾಕುತ್ತಾನೆ. ಈ ಬಗ್ಗೆ ಪ್ರಾರಂಭದಲ್ಲೇ ಪ್ರಸ್ತಾಪಿಸಲಾಗಿದೆ. ಕೃಷ್ಣ ಹೇಳಿದ್ದ: "ನಾವೆಲ್ಲರೂ ಹಿಂದೆಯೂ ಇದ್ದೆವೂ ಹಾಗು ಈಗ ಇದ್ದೇವೆ ಮತ್ತು ಮುಂದೆಯೂ ಇರುತ್ತೇವೆ" ಎಂದು(ಅ-2 ,ಶ್ಲೋ-12). ಅದರ ಸಂಪೂರ್ಣ ವಿವರಣೆ ಇಲ್ಲಿ ಬರುತ್ತದೆ. ಯಾವ ಕರ್ಮಬಂಧನವಿಲ್ಲದ ಸರ್ವ ಸಮರ್ಥನಾದ ಭಗವಂತ ಭೂಮಿಗೇಕೆ ಇಳಿದು ಬರುತ್ತಾನೆ ಎನ್ನುವ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಉತ್ತರಿಸಿದ್ದಾನೆ.

  • ಶ್ಲೋಕ - 05

    ಭಗವಾನುವಾಚ ।
    ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ ।
    ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ॥೫॥

    ಭಗವಾನ್ ಉವಾಚ-ಭಗವಂತ ಹೇಳಿದನು : ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚ ಅರ್ಜುನ |
    ತಾನಿ ಅಹಮ್ ವೇದ ಸರ್ವಾಣಿ ನ ತ್ವಮ್ ವೇತ್ಥ ಪರಂತಪ-ಓ ಅರ್ಜುನ, ನನಗೆ ಹಲವಾರು ಹುಟ್ಟುಗಳು ಆಗಿ ಹೋದವು. ನಿನಗೆ ಕೂಡಾ. ಓ ಅರಿಗಳನ್ನು ತರಿದವನೆ, ಅವನ್ನೆಲ್ಲ ನಾನು ಬಲ್ಲೆ- ಆದರೆ ನಿನಗೆ ಗೊತ್ತಿಲ್ಲ.

    ಜನ್ಮ ಅಂದರೆ ಜನನ ಅಥವಾ ಹುಟ್ಟುವುದು. ಇಲ್ಲದೇ ಇರುವುದು ಹುಟ್ಟುವುದಿಲ್ಲ. ಜಡವನ್ನು ಹುಟ್ಟಿತು ಎಂದು ನಾವು ಕರೆಯುವುದಿಲ್ಲ. ಸೂಕ್ಷ್ಮ ಶರೀರದಿಂದ ಸ್ಥೂಲ ಶರೀರದಲ್ಲಿ ಕಾಣಿಸಿಕೊಳ್ಳುವುದು ಜನನ. ಸಾಯುವುದು ಅಂದರೆ ಸೂಕ್ಷ್ಮಶರೀರ ಸ್ಥೂಲಶರೀರವನ್ನು ತೈಜಿಸುವುದು. ಇಲ್ಲಿ ಕೃಷ್ಣ ಹೇಳುತ್ತಾನೆ: "ನನಗೆ ಹಾಗು ನಿನಗೆ ಅನೇಕ ಹುಟ್ಟುಗಳು ಆಗಿ ಹೋದವು. ನನಗೆ ಅದು ತಿಳಿದಿದೆ ಆದರೆ ಪರಂತಪನಾದ ನಿನಗೂ ಈ ವಿಚಾರ ತಿಳಿದಿಲ್ಲ" ಎಂದು.

    ಶ್ಲೋಕ - 06

    ಅಜೋSಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋSಪಿ ಸನ್ ।
    ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ ॥೬॥ 

    ಅಜಃ ಅಪಿ ಸನ್ ಅವ್ಯಯ ಆತ್ಮಾ ಭೂತಾನಾಮ್ ಈಶ್ವರಃ ಅಪಿ ಸನ್ |
    ಪ್ರಕೃತಿಮ್ ಸ್ವಾಮ್ ಅಧಿಷ್ಠಾಯ ಸಂಭವಾಮಿ ಆತ್ಮಮಾಯಯಾ-ನನಗೆ ಹುಟ್ಟೆಂಬುದಿಲ್ಲ. ನನ್ನ ದೇಹಕ್ಕೆ ಕೂಡಾ ಸಾವಿಲ್ಲ. ನಾನು ಎಲ್ಲಾ ಜೀವಿಗಳ ಒಡೆಯರಿಗೂ ಒಡೆಯ. ಆದರೂ ನನ್ನಂಕೆಯಲ್ಲಿರುವ ಪ್ರಕೃತಿಮಯವಾದ ಶರೀರವನ್ನು ಹೊಕ್ಕು ಜ್ಞಾನ ಸ್ವರೂಪದಿಂದಲೇ (ನನ್ನ ಸಹಜ ಸ್ವಭಾವವನ್ನಾಧರಿಸಿ ನನ್ನಿಚ್ಛೆಯಿಂದಲೇ ) ಮೂಡಿಬರುವೆ.

    ಸಮಸ್ತ ಜೀವ ಜಾತದ ಒಡೆಯನಾದ ಭಗವಂತ ಅನೇಕ ಬಾರಿ ಭೂಮಿಗೆ ಇಳಿದು ಬರುತ್ತಾನೆ. ಆತನಿಗೆ ಹುಟ್ಟು ಅನ್ನುವುದಿಲ್ಲ. ಆದರೂ ಹುಟ್ಟಿ ಬರುತ್ತಾನೆ. ಆತ ಅವ್ಯಯ; ಆತ ನಶ್ವರವಾದ ದೇಹವನ್ನು ಹೊತ್ತು ಹುಟ್ಟುವುದಿಲ್ಲ. ಆದ್ದರಿಂದ ದೇಹದ ಮೂಲಕ ಹುಟ್ಟು-ಸಾವು ಭಗವಂತನಿಗಿಲ್ಲ. ಇಲ್ಲಿ ಬಂದಿರುವ 'ಆತ್ಮ ಮಾಯಯಾ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಜೀವಕ್ಕೆ ಕವಿದ ಮೋಹದ ಪರದೆ ಆತ್ಮ ಮಾಯೆ; ಭಗವಂತನ ಮಹಿಮೆ ಆತ್ಮ ಮಾಯೆ; ಭಗವಂತನ ಸ್ವಂತ ಇಚ್ಚೆ ಹಾಗು ಜ್ಞಾನ ಆತ್ಮ ಮಾಯೆ. ಭಗವಂತ ಭೂಮಿಗೆ ಇಳಿದು ಬರುವುದು ಆತನ ಜ್ಞಾನದ ಮಹಿಮೆಯಿಂದ ಹೊರತು ಯಾವುದೋ ಮಾಯೆಯ ಅಧೀನನಾಗಿ ಅಲ್ಲ. ಭಗವಂತ ತನ್ನ ಭಕ್ತರ ಕಳಕಳಿಯನ್ನು ಈಡೇರಿಸುವುದಕ್ಕೊಸ್ಕರ ಇಚ್ಛಾಪೂರ್ವಕವಾಗಿ ತಾನೇ ನಿರ್ಮಿಸಿರುವ ಪ್ರಕೃತಿಯನ್ನು ಮಾಧ್ಯಮವಾಗಿ ಬಳಸಿ ಇಳಿದು ಬರುತ್ತಾನೆ. ಇದು ಆತನ ಮಹಿಮೆ. ಮೋಹದ ಪರದೆಯಲ್ಲಿ ಬದುಕುವ ನಮಗೆ ಇದು ಒಂದು ಸಾಮಾನ್ಯ ಹುಟ್ಟು ಎನ್ನುವಂತೆ ಕಾಣುತ್ತದೆ. ಏಕೆಂದರೆ ನಮಗೆ ಆತನ ಜ್ಞಾನಾನಂದಮಯ ಶರೀರವನ್ನು ಕಾಣಲು ಸಾಧ್ಯವಿಲ್ಲ. ನಮಗೆ ಸ್ವಯಂ ನಮ್ಮ ಜೀವ ಸ್ವರೂಪದ ಅರಿವೇ ಇಲ್ಲ-ಹೀಗಿರುವಾಗ ಭಗವಂತನನ್ನು ಅರಿಯುವುದು ಸಾಧ್ಯವೇ? ಈ ಕಾರಣದಿಂದ ನಮಗೆ ಭಗವಂತ ಪಾಂಚಭೌತಿಕ ಶರೀರದವನಂತೆ ಕಾಣುತ್ತಾನೆ. ನಮಗೆ ತಿಳಿದಂತೆ ಕೆಲವು ಪ್ರಾಣಿಗಳಿಗೆ ಬಣ್ಣ ಕಾಣುವುದಿಲ್ಲ. ಅವುಗಳ ಕಣ್ಣಿಗೆ ಆ ಶಕ್ತಿ ಇಲ್ಲ. ಆದ್ದರಿಂದ ಎಲ್ಲವೂ ಕಪ್ಪು ಬಿಳುಪು. ಆದರೆ ನಿಜವಾಗಿ ಪ್ರಪಂಚದಲ್ಲಿ ಬಣ್ಣವಿದೆ, ಆ ಪ್ರಾಣಿಗಳಿಗೆ ಬಣ್ಣವನ್ನು ಗ್ರಹಿಸುವ ಶಕ್ತಿ ಇಲ್ಲ ಅಷ್ಟೇ. ಹಾಗೇ ಮೋಹದ ಪರದೆಯಲ್ಲಿ ಬದುಕುವ ನಮಗೆ ಭಗವಂತನ ಜ್ಞಾನಾನಂದ ಸ್ವರೂಪ ಶರೀರ ಕಾಣಿಸುವುದಿಲ್ಲ, ಬದಲಿಗೆ ಪಾಂಚಭೌತಿಕ ಶರೀರ ಹುಟ್ಟಿ ನಾಶವಾದಂತೆ ಕಾಣುತ್ತದೆ. ಆದರೆ ಮೂಲತಃ ಭಗವಂತನಿಗೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಆತ ತನ್ನ ಸಹಜ ಸ್ವಭಾವದಿಂದ ಸ್ವ ಇಚ್ಚೆಯಿಂದ ಮೂಡಿ ಬರುತ್ತಾನೆ.
    ಭಗವಂತ ಯಾವ ಕಾರಣಕ್ಕೋಸ್ಕರ ಭೂಮಿಗಿಳಿದು ಬರುತ್ತಾನೆ? ಅದರ ಹಿಂದಿರುವ ದೈವೀ ಸಂಕಲ್ಪ ಏನು? ಈ ಪ್ರಶ್ನೆಗೆ ಉತ್ತರ ಮುಂದಿನ ಎರಡು ಶ್ಲೋಕದಲ್ಲಿ ಕಾಣಬಹುದು.

  • ಶ್ಲೋಕ - 07

    ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
    ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್ ॥೭॥

    ಯದಾಯದಾ ಹಿ ಧರ್ಮಸ್ಯ ಗ್ಲಾನಿಃ ಭವತಿ ಭಾರತ |
    ಅಭ್ಯುತ್ಥಾನಮ್ ಅಧರ್ಮಸ್ಯ ತದಾ ಆತ್ಮಾನಮ್ ಸೃಜಾಮಿ ಅಹಮ್-ಓ ಭಾರತ, ಧರ್ಮ ಕಳೆಗುಂದಿದಾಗೆಲ್ಲ, ಅಧರ್ಮ ತಲೆಯತ್ತಿದಾಗೆಲ್ಲ ನಾನು ನನ್ನನ್ನು ಹುಟ್ಟಿಸಿಕೊಳ್ಳುತ್ತೇನೆ.
    ಇಡಿಯ ಪ್ರಪಂಚದಲ್ಲಿ ಯಾವಾಗ-ಯಾವಾಗ ಧರ್ಮ ಮಲೀನವಾಗಿ ಅಧರ್ಮದ ಮುಂದೆ ಸೋಲೊಪ್ಪಿಕೊಂಡು, ತಲೆ ಕೆಳಗಾಗಿ ನಿಲ್ಲುವ ಪ್ರಸಂಗ ಬರುತ್ತದೋ, ಆಗ ನಾನು ಧರೆಗಿಳಿದು ಬರುತ್ತೇನೆ ಎನ್ನುತ್ತಾನೆ ಕೃಷ್ಣ. ಇಲ್ಲಿ ಧರ್ಮ ಸೋಲುವುದು ಅಂದರೆ ಅದು ಒಂದು ಮನೆಗೆ- ಒಂದು ದೇಶಕ್ಕೆ ಸಂಬಂಧಪಟ್ಟಿದ್ದಲ್ಲ. ಇಡೀ ವಿಶ್ವದಲ್ಲೇ ಧರ್ಮಕ್ಕೆ ನೆಲೆ ಸಿಗದ ಪರಿಸ್ಥಿತಿ ಬಂದಾಗ ಭಗವಂತನ ಅವತಾರವಾಗುತ್ತದೆ. ದುಷ್ಟ ಶಕ್ತಿಗಳು ಭೂಮಿಯ ಮೇಲೆ ಹಿಡಿತ ಸಾಧಿಸಿ ಸತ್ವಗುಣದ ತಲೆ ಎತ್ತದಂತೆ ಮಾಡಿದಾಗ, ಭಗವಂತ ತನ್ನನ್ನು ತಾನು ಭೂಮಿಯ ಮೇಲೆ ಸೃಷ್ಟಿಸಿಕೊಳ್ಳುತ್ತಾನೆ. "ತದಾSSತ್ಮಾನಂ ಸೃಜಾಮ್ಯಹಮ್" ಎನ್ನುವಲ್ಲಿ 'ನಾನು ನನ್ನ ಆತ್ಮೀಯರನ್ನು ಕಳುಹಿಸುತ್ತೇನೆ' ಎನ್ನುವ ಹಾಗು 'ನಾನೇ ಅವತರಿಸುತ್ತೇನೆ' ಎನ್ನುವ ಎರಡು ಧ್ವನಿ ಇದೆ. ಧರ್ಮಕ್ಕೆ ಸೋಲಾಗುವ ಲಕ್ಷಣಗಳು ಪ್ರಾಂತೀಯವಾಗಿ ಕಂಡು ಬಂದಾಗ ಭಗವಂತ ತನಗೆ ಆತ್ಮೀಯರಾದವರನ್ನು(ದೇವತೆಗಳನ್ನು) ಭೂಮಿಗೆ ಕಳುಹಿಸುತ್ತಾನೆ. ಅವರು ಆಚಾರ್ಯಪುರುಷರಾಗಿ ಬಂದು ಸಮಾಜವನ್ನು ತಿದ್ದುತ್ತಾರೆ. ಇಂತಹ ವ್ಯವಸ್ಥೆ ಕೂಡಾ ಕುಸಿದು ತಾಮಸ ಶಕ್ತಿಗಳು ವಿಜೃಂಭಿಸಿದಾಗ, ಕೊನೆಯದಾಗಿ ಭಗವಂತ ಸ್ವಯಂ ಅವತಾರವೆತ್ತುತ್ತಾನೆ. ಕೃಷ್ಣನ ಅವತಾರವಾದ ಸಮಯದ ಸ್ಥಿತಿಯನ್ನು ಗಮನಿಸಿದಾಗ ಆ ಕಾಲದ ಧರ್ಮದ ಪಾಡೇನು ಎನ್ನುವುದು ಸ್ಪಷ್ಟವಾಗುತ್ತದೆ. ಜರಾಸಂಧ ಪ್ರಪಂಚದ ಮೂಲೆ ಮೂಲೆಯಲ್ಲಿನ ಸುಮಾರು 22,800 ರಾಜಕುಮಾರರನ್ನು ತನ್ನ ಸೆರೆಯಲ್ಲಿಟ್ಟಿದ್ದ. ಕಂಸನಿಗೆ ತನ್ನ ಮಗಳನ್ನು ಕೊಟ್ಟು ಆತನನ್ನು ಎತ್ತಿಕಟ್ಟಿ, ಶೂರಸೇನನನ್ನು ಸೆರೆಮನೆಗೆ ಹಾಕುವಂತೆ ಕುತಂತ್ರ ಮಾಡಿ, ಅದರಲ್ಲಿ ಯಶಸ್ವಿಯಾಗಿದ್ದ ಜರಾಸಂಧ. ಇನ್ನು ಆತನ ಮಿತ್ರ ನರಕಾಸುರ ಸುಮಾರು 16,100 ರಾಜಕುಮಾರಿಯರನ್ನು ಸೆರೆಮನೆಯಲ್ಲಿಟ್ಟಿದ್ದ. ಭೀಷ್ಮಾಚಾರ್ಯರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ಇಡೀ ಭೂಲೋಕದಲ್ಲಿ ತನ್ನದೇ ಆದ ಏಕಚಕ್ರಧಿಪತ್ಯವನ್ನು ಸ್ಥಾಪಿಸುವ, ಹಾಗು ಜನರನ್ನು ಸುಲಿಗೆ ಮಾಡುವ ಕುತಂತ್ರ ರೂಪಿಸಿದ್ದ ಜರಾಸಂಧ. ಅಂದಿನ ಭಾರತ ಇಂದಿನ ಭಾರತದಂತಿರಲಿಲ್ಲ. ಅದು ಅತಿದೊಡ್ಡ ಭೂ ಭಾಗವಾಗಿತ್ತು. ಒಂದು ವೇಳೆ ಕೃಷ್ಣನ ಅವತಾರ ಆಗದೇ ಇದ್ದಿದ್ದರೆ ಇಡೀ ಭೂಲೋಕ ಈ ಪಾಪಿಗಳ ಕೈವಶವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕೃಷ್ಣ ಅವತರಿಸಿದ. ಕಂಸನನ್ನು ಕೊಂದು ಶೂರಸೇನನನ್ನು ಮರಳಿ ರಾಜನನ್ನಾಗಿ ಮಾಡಿದ ಕೃಷ್ಣ, ನರಕಾಸುರನನ್ನು ಕೊಂದು, ಆತನ ಕೈ ಕೆಳಗಿನ ರಾಜಕುಮಾರಿಯರನ್ನು ಬಿಡುಗಡೆಗೊಳಿಸಿದ. ಹೀಗೆ ಬಿಡುಗಡೆಗೊಂಡ ರಾಜಕುಮಾರಿಯರು ಶೀಲ ಶಂಕಿಸುವ ಸಮಾಜಕ್ಕೆ ಹೆದರಿದಾಗ ಅವರಿಗೆ ಅಭಯವನ್ನು ಕೊಟ್ಟು, ಅವರನ್ನು ತಾನೇ ಮದುವೆಯಾಗಿ ಅವರ ಗೌರವವನ್ನು ಕಾಪಾಡಿದ. ಜರಾಸಂಧ ಕೃಷ್ಣನ ಮೇಲೆ ಸುಮಾರು 23 ಅಕ್ಷೌಹಿಣಿ ಸೈನ್ಯದೊಂದಿಗೆ ದಾಳಿ ಮಾಡಿದಾಗ ಓಡಿ ಹೋದಂತೆ ನಟಿಸಿ, ನಂತರ ಭೀಮಾರ್ಜುನರೊಂದಿಗೆ ಜರಾಸಂಧನನ್ನು ಸಂಧಿಸಿ- ಅಲ್ಲಿ ನಡೆದ ಮಲ್ಲ ಯುದ್ಧದಲ್ಲಿ ಭೀಮನಿಂದ ಜರಾಸಂಧನ ವದೆಯಾಗುವಂತೆ ಮಾಡಿದ. ಹಾಗು ಆತನ ಸೆರೆಯಲ್ಲಿದ್ದ ಎಲ್ಲಾ ರಾಜಕುಮಾರರರನ್ನು ಅವರವರ ರಾಜ್ಯಕ್ಕೆ ಕಳುಹಿಸಿಕೊಟ್ಟ.
    ಹೀಗೆ ಇಡೀ ಭೂಲೋಕ ಅಧರ್ಮದ ದಾಸ್ಯಕ್ಕೆ ಗುರಿಯಾಗುವ ಸಂದರ್ಭ ಬಂದಾಗ ಮಾತ್ರ ಭಗವಂತನ ಅವತಾರ ಭೂಲೋಕದಲ್ಲಿ ಆಗುತ್ತದೆ.




  • No comments:

    Post a Comment