ಶ್ಲೋಕ - 01
ಎರಡನೆ ಅಧ್ಯಾಯದಲ್ಲಿ ಭಗವಂತನ ಅರಿವು, ಆ ಅರಿವನ್ನು ಪಡೆಯುವ ಉಪಾಯವನ್ನು ಕೃಷ್ಣ ವಿವರಿಸಿದ. ಈ ಉಪದೇಶದಲ್ಲಿ ಒಂದು ಕಡೆ ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠ, ಜ್ಞಾನದ ಮುಂದೆ ಕರ್ಮ ಏನೂ ಅಲ್ಲ ಎನ್ನುತ್ತಾನೆ ಕೃಷ್ಣ. ಇನ್ನೊಂದು ಕಡೆ ಅರ್ಜುನನಲ್ಲಿ ತಾಮಸಿಕವಾದ ಯುದ್ಧವನ್ನು ಮಾಡು ಎನ್ನುತ್ತಾನೆ! ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ಏಕೆ ಬೇಕು ಈ ತಾಮಸಿಕವಾದ ರಾಗ-ದ್ವೇಷವಿರುವ ಯುದ್ಧ? ಮೂರನೇ ಅಧ್ಯಾಯ ಅರ್ಜುನನ ಈ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ.
ಅರ್ಜುನ ಉವಾಚ ।
ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ ।
ತತ್ ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ ॥೧॥
ಕೃಷ್ಣ ಜ್ಞಾನ ಮತ್ತು ಕರ್ಮದ ಬಗ್ಗೆ ಕೊಟ್ಟ ವಿವರಣೆಯಿಂದ ಅರ್ಜುನನಿಗೆ ಗೊಂದಲವಾಗುತ್ತದೆ. ತನಗೆ ಯಾವ ಮಾರ್ಗ ಉಚಿತ ಎನ್ನುವ ಪ್ರಶ್ನೆ ಆತನನ್ನು ಕಾಡುತ್ತದೆ. ಕೃಷ್ಣ ಒಮ್ಮೆ ಜ್ಞಾನ ಮಾರ್ಗದಲ್ಲಿ ಸಾಗು-ಅದು ಶ್ರೇಷ್ಠ ಎನ್ನುತ್ತಾನೆ, ಇನ್ನೊಮ್ಮೆ ಯುದ್ಧ ಮಾಡು ಅನ್ನುತ್ತಾನೆ! ತಾನೇಕೆ ಶ್ರೇಷ್ಠವಾದ ಜ್ಞಾನ ಮಾರ್ಗದಲ್ಲಿ ಸಾಗಬಾರದು, ಯುದ್ಧವನ್ನೇಕೆ ಮಾಡಬೇಕು ಎನ್ನುವ ಗೊಂದಲ ಅರ್ಜುನನದು. ಈ ಗೊಂದಲದಲ್ಲಿ ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ: “ಓ ಜನಾರ್ದನ, ಕರ್ಮಕ್ಕಿಂತ ಜ್ಞಾನ ಮಾರ್ಗ ಶ್ರೇಷ್ಠ ಎನ್ನುವುದು ನಿನ್ನ ಅಭಿಮತವಾದರೆ, ನನ್ನ ಹತ್ತಿರ ಕರ್ಮ ಮಾಡು ಎಂದು ಏಕೆ ಹೇಳುತ್ತಿದ್ದೀಯ? ಯುದ್ಧ ಎನ್ನುವುದು ಘೋರ ರಾಗ-ದ್ವೇಷಗಳಿಂದ ತುಂಬಿದ ತಾಮಸಕಾರ್ಯ. ಅದು ಅಧ್ಯಾತ್ಮ ಸಾಧನೆಗೆ ತೀರ ವಿರುದ್ಧವಾದ ಕರ್ಮ. ಹೀಗಿರುವಾಗ ನನ್ನನ್ನೇಕೆ ಈ ಕಾರ್ಯದಲ್ಲಿ ತೊಡಗಿಸುತ್ತಿರುವೆ ಕೇಶವ?” ಎಂದು.
ಈ ಶ್ಲೋಕದಲ್ಲಿ ‘ಜನಾರ್ದನ’ ಮತ್ತು ‘ಕೇಶವ’ ಎನ್ನುವ ಎರಡು ನಾಮ ವಿಶೇಷಣವನ್ನು ಬಳಸಿದ್ದಾರೆ. ಈ ವಿಶೇಷಣದಲ್ಲಿ-ಪ್ರಶ್ನೆ ಮಾಡುತ್ತಿರುವ ಅರ್ಜುನನ ಭಾವ ಅಡಗಿದೆ. ಜನ+ಅರ್ಧನ ಅಂದರೆ ಜನರನ್ನು ನಾಶ ಮಾಡುವವ! ಇಲ್ಲಿ ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. “ದುಷ್ಟ ನಿಗ್ರಹಕ್ಕಾಗಿ ಅವತರಿಸಿದ ನೀನು, ನನ್ನಿಂದ ಈ ಕಾರ್ಯವನ್ನು ಮಾಡಿಸುತ್ತಿದ್ದೀಯ. ಆದರೆ ಇಲ್ಲಿ ಸೇರಿರುವರೆಲ್ಲ ದುರ್ಜನರಲ್ಲ. ಹೀಗಿರುವಾಗ ಅವರನ್ನು ಕೊಲ್ಲುವ ಕರ್ಮ ಶ್ರೇಷ್ಠ ಹೇಗಾದೀತು? ಜನನ ಮುಕ್ತಗೊಳಿಸಿ ಮೋಕ್ಷವನ್ನು ಕರುಣಿಸುವ ನೀನು, ನನ್ನಿಂದ ಗುರು ಹಿರಿಯರನ್ನು ಕೊಲ್ಲುವ ಈ ಘೋರ ಕರ್ಮವನ್ನು ಏಕೆ ಮಾಡಿಸುತ್ತಿರುವೆ?”. ಎನ್ನುವುದು ಅರ್ಜುನನ ಪ್ರಶ್ನೆ. ಶ್ಲೋಕದ ಕೊನೆಯಲ್ಲಿ ‘ಕೇಶವ’ ಎನ್ನುವ ನಾಮವಿಶೇಷಣ ಅರ್ಜುನನ ಶರಣಾಗತಿಯನ್ನು ಸೂಚಿಸುತ್ತದೆ. ಕಾ+ಈಶ+ವ-ಕೇಶವ; ಇಲ್ಲಿ ’ಕಾ’ ಎಂದರೆ ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ ; ಈಶ ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ. ಕೇಶವ ಅಂದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯನ್ನೊಳಗೊಂಡ ಪರಶಕ್ತಿ. “ಸೃಷ್ಠಿ-ಸ್ಥಿತಿ-ಸಂಹಾರ-ಮೊಕ್ಷಗಳಿಗೆ ಕಾರಣನಾದ ನೀನು ನನ್ನನ್ನು ಈ ಗೊಂದಲದಿಂದ ಪಾರು ಮಾಡು” ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಶರಣಾಗಿ ಬೇಡುತ್ತಾನೆ.
ಶ್ಲೋಕ - 02
ವ್ಯಾಮಿಶ್ರೇಣ್ಯೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ ।
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋsಹಮಾಪ್ನುಯಾಮ್ ॥೨॥
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋsಹಮಾಪ್ನುಯಾಮ್ ॥೨॥
ಇಲ್ಲಿ 'ವ್ಯಾಮಿಶ್ರೇಣ' ಎಂದರೆ ಸಂದಿಗ್ದಾರ್ಥ (Contradicting, Confusing). “ಈ ರೀತಿ ಇಬ್ಬಗೆಯ ಮಾತಿನಿಂದ ನನಗೆ ಯಾವುದು ಸರಿ-ಯಾವುದು ತಪ್ಪು ಎನ್ನುವ ತೀರ್ಮಾನ ಬರುತ್ತಿಲ್ಲ, ಹಾಗು ಆ ಶಕ್ತಿ ನನ್ನಲ್ಲಿಲ್ಲ. ನಿನ್ನ ಅಭಿಪ್ರಾಯವನ್ನು ನಾನು ಗ್ರಹಿಸಲಾರೆ. ಯಾವ ದಾರಿಯಲ್ಲಿ ನಡೆದರೆ ನಾನು ಶ್ರೇಯಸ್ಸನ್ನು ಪಡೆದೇನು? ನನ್ನ ಬದುಕು ಸಾರ್ಥಕವಾಗುವ ನಿಶ್ಚಿತ ದಾರಿಯನ್ನು ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.
ಶ್ಲೋಕ - 03
ಭಗವಾನುವಾಚ ।
ಲೋಕೇsಸ್ಮಿನ್ ದ್ವಿವಿದಾ ನಿಷ್ಠಾ ಪುರಾ ಪ್ರೋಕ್ತಾ ಮಯಾsನಘ ।
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ॥೩॥
ಲೋಕೇsಸ್ಮಿನ್ ದ್ವಿವಿದಾ ನಿಷ್ಠಾ ಪುರಾ ಪ್ರೋಕ್ತಾ ಮಯಾsನಘ ।
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ॥೩॥
ಈ ಹಿಂದೆ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಹೇಳಿದ್ದ ಕೃಷ್ಣ, ಯಾವ ನೆಲೆಯಲ್ಲಿ ಯಾವ ಸ್ತರದಲ್ಲಿ ಯಾವುದು ಮುಖ್ಯ ಎನ್ನುವ ವಿಚಾರವನ್ನು ಇಲ್ಲಿ ವಿವರಿಸುತ್ತಾನೆ. ಕರ್ಮಯೋಗದ ಬಗ್ಗೆ ವಿಶೇಷ ವಿವರಣೆ ಇಲ್ಲಿಂದ ಆರಂಭವಾಗುತ್ತದೆ.
ಈ ಶ್ಲೋಕದಲ್ಲಿ 'ನಿಷ್ಠಾ' ಎನ್ನುವ ಪದ ಬಳಕೆಯಾಗಿದೆ. ಇಲ್ಲಿ 'ನಿಷ್ಠಾ' ಎಂದರೆ ಜೀವನದ ನಡೆ ಅಥವಾ ಕೊನೇಯ ಸ್ಥಿತಿ-ಅದೇ 'ಮೋಕ್ಷ'. ಕೃಷ್ಣ ಹೇಳುತ್ತಾನೆ: “ಸಾಧಕರಲ್ಲಿ ಎರಡು ವಿಧ -ಸಾಂಖ್ಯರು ಮತ್ತು ಯೋಗಿಗಳು" ಎಂದು. ಇಲ್ಲಿ ಸಾಂಖ್ಯರು ಎಂದರೆ ಜ್ಞಾನಮಾರ್ಗದಲ್ಲಿ ಸಾಧನೆ ಮಾಡುವವರು. ಯೋಗಿಗಳು ಎಂದರೆ ಕರ್ಮಸಾಧನೆಯ ಮೂಲಕ ಸಾಧನೆ ಮಾಡುವವರು.
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ : “ಜ್ಞಾನದ ಸಾಧಕರು ಜ್ಞಾನ ಮಾರ್ಗದಲ್ಲಿ ಹೋಗಬೇಕು, ಕರ್ಮದ ಮೂಲಕ ಸಾಧನೆ ಮಾಡುವವರು ಕರ್ಮದ ದಾರಿಯಲ್ಲಿ ಹೋಗಬೇಕು” ಎಂದು ಹೇಳಿದಂತೆ ಕಾಣಿಸುತ್ತದೆ. ಇಲ್ಲಿ ಅರ್ಜುನ ಕರ್ಮದ ಮೂಲಕ ಸಾಧನೆ ಮಾಡಬೇಕಾದವ, ಆದ್ದರಿಂದ ಕೃಷ್ಣ ಆತನಲ್ಲಿ ಯುದ್ಧ ಮಾಡು ಎಂದು ಹೇಳಿದ ಎನ್ನುವಂತೆ ಕಾಣುತ್ತದೆ. ಆದರೆ ಅದು ನಿಜವಾದ ಅರ್ಥವಲ್ಲ. ನಿಮಗೆ ತಿಳಿದಂತೆ ಅರ್ಜುನ ಆ ಕಾಲದ ಮಹಾ ಜ್ಞಾನಿಗಳಲ್ಲಿ ಒಬ್ಬ. ಹಾಗಿರುವಾಗ ನಾವು ಈ ರೀತಿ ಮೇಲ್ನೋಟದ ಅರ್ಥವನ್ನು ಈ ಶ್ಲೋಕಕ್ಕೆ ಅರ್ಥೈಸಬಾರದು. ಇಲ್ಲಿ ಆಳವಾದ ಚಿಂತನೆ ಅಗತ್ಯ.
ಶಾಸ್ತ್ರಗಳಲ್ಲಿ ಹೇಳುವಂತೆ ಜ್ಞಾನದಿಂದ ಮಾತ್ರ ಮೋಕ್ಷಕ್ಕೆ ಹೋಗಲು ಸಾಧ್ಯ. ಮೋಕ್ಷಕ್ಕೆ ಬೇರೆ ಮಾರ್ಗವೇ ಇಲ್ಲ. ಅಂದಮೇಲೆ ಮೋಕ್ಷ ಸಾಧನೆಗೆ ಜ್ಞಾನ ಬೇಕೇಬೇಕು. ಕರ್ಮವಿರುವುದು ಜ್ಞಾನಕ್ಕಾಗಿ. ಜ್ಞಾನಕ್ಕೆ ಪೂರಕವಲ್ಲದ ಕರ್ಮ ಕರ್ಮವಲ್ಲ. ಬೆಳಗಿನಿಂದ ಸಂಜೆಯ ತನಕ ಜಪ ಮಣಿ ಹಿಡಿದು ಮಡಿ-ಮಡಿ ಎಂದು ಕುಳಿತರೆ ಅದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು. ನಾವು ಏನೇ ಕರ್ಮ ಮಾಡುವುದಿದ್ದರೂ ಅದನ್ನು ತಿಳಿದು ಮಾಡಬೇಕು. ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಬೇಕು. ಆದ್ದರಿಂದ ಬರೀ ಜ್ಞಾನಯೋಗವೆಂದಾಗಲಿ, ಬರೀ ಕರ್ಮಯೋಗವೆಂದಾಗಲಿ ಇಲ್ಲ. ಕರ್ಮವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ಕರ್ಮವಿಲ್ಲ. ಛಾ೦ಧೋಕ್ಯ ಉಪನಿಷತ್ತಿನಲ್ಲಿ ಹೇಳುವಂತೆ: "ಯದೇವ ವಿದ್ಯಯಾ ಕರೋತಿ ಶ್ರದ್ಧೆಯ ಉಪನಿಷದಾ, ತದೇವ ವೀರ್ಯವತ್ತರ೦ ಭವತಿ , ವಿಜ್ಞಾನ೦ ಯಜ್ಞಾ೦ ತನುತೇ". ಅಂದರೆ “ನೀನು ಏನನ್ನೂ ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ”. ಮಾಡುವ ಕರ್ಮವನ್ನು ಏತಕ್ಕಾಗಿ ಮಾಡುತ್ತಿದ್ದೇವೆ, ಮಾಡುವುದರ ಫಲವೇನು, ಮಾಡುವುದು ಹೇಗೆ-ಎನ್ನುವುದು ಗೊತ್ತಿರಬೇಕು. ಅಜ್ಞಾನದಿಂದ ಮಾಡುವ ಕರ್ಮ ವ್ಯರ್ಥವಾಗುತ್ತದೆ. ಇಲ್ಲಿ ಕೃಷ್ಣ ಹೇಳಿರುವುದು ಒಂದು ಕರ್ಮಪ್ರದವಾದ ಮಾರ್ಗ(ಜನಕಾದಿಗಳಂತೆ) ಹಾಗು ಇನ್ನೊಂದು ಜ್ಞಾನಪ್ರದವಾದ ಮಾರ್ಗ(ಸನಕಾದಿಗಳಂತೆ).
ಶ್ಲೋಕ - 04
ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋsಶ್ನುತೇ ।
ನಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ ॥೪॥
ನಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ ॥೪॥
ಶಾಸ್ತ್ರಗಳಲ್ಲಿ ಹೇಳುವಂತೆ 'ಕರ್ಮ ಬಂಧನದ ದಾರಿ ಹಾಗು ಜ್ಞಾನ ಬಿಡುಗಡೆಯ ದಾರಿ'. ಆದರೆ ಕೃಷ್ಣ ಹೇಳಿದ -ಮೋಕ್ಷಕ್ಕೆ ಜ್ಞಾನಪ್ರದವಾದ ಮತ್ತು ಕರ್ಮಪ್ರದವಾದ ಎರಡು ಮಾರ್ಗಗಳಿವೆ ಎಂದು. ಇಲ್ಲಿ ಅದರ ವಿವರಣೆ ಕೊಡುತ್ತಾನೆ ಕೃಷ್ಣ. “ಮೋಕ್ಷ ನಿಷ್ಕರ್ಮದಿಂದ ಪಡೆಯುವಂತದ್ದು-ಕರ್ಮ ಬಂಧಕ” ಅನ್ನುವುದಾದರೆ, ಒಂದು ಶರೀರದಲ್ಲಿ ಜೀವ ಏನೂ ಕರ್ಮ ಮಾಡದೆ ಇರಲು ಸಾಧ್ಯವೇ ಇಲ್ಲ. ದೇಹ ಬಂದ ಮೇಲೆ ಕರ್ಮ ಕ್ರಿಯೆ ನಡೆದೇ ನಡೆಯುತ್ತದೆ. ಕರ್ಮ ಮಾಡುವುದನ್ನು ಬಿಟ್ಟ ತಕ್ಷಣ ಮೋಕ್ಷ ದೊರೆಯದು. ಮೂಲತಃ ಕರ್ಮವನ್ನು ತೊರೆಯುವುದೂ ಸಾಧ್ಯವಿಲ್ಲ. ಜ್ಞಾನಕ್ಕೆ ಪೂರಕವಲ್ಲದ ಯಾಂತ್ರಿಕ ಕರ್ಮ ಬಂಧಕ. ಜ್ಞಾನಕ್ಕೆ ಪೂರಕವಾದ ಕರ್ಮ ಎಂದೂ ಬಂಧಕವಲ್ಲ. ಕರ್ಮದ ಫಲವನ್ನು ಬಯಸದೇ ಇದ್ದ ತಕ್ಷಣ ಯಾವ ಸಿದ್ಧಿಯೂ ಆಗದು. ಕೇವಲ ಕರ್ಮತ್ಯಾಗ ಮಾಡುವುದರಿಂದ ಎಂದೂ ಸಿದ್ಧಿ ಪಡೆಯಲು ಸಾಧ್ಯವಿಲ್ಲ.
ಶ್ಲೋಕ - 05
ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥೫॥
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥೫॥
ಕರ್ಮತ್ಯಾಗದಿಂದ ಸಿದ್ಧಿ ಸಿಗದು. ಅಷ್ಟೇ ಅಲ್ಲ, ಕರ್ಮ ತ್ಯಾಗ ಮಾಡುವುದು ಸಾಧ್ಯವಿಲ್ಲ! ನಮ್ಮ ಅನ್ನಮಯ ಮತ್ತು ಪ್ರಾಣಮಯ ಕೋಶ ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತವೆ. ಬದುಕಿರುವಾಗ ನಿಷ್ಕ್ರೀಯರಾಗಿರುವುದು ಅಸಾಧ್ಯ. ಯಾವ ಕಾಲದಲ್ಲೂ ಕೂಡಾ ಒಂದು ಕ್ಷಣ ನಿಷ್ಕ್ರೀಯನಾಗಿ ಇರುವುದು ಸಾಧ್ಯವಿಲ್ಲ. "ಕಾರ್ಯತೇ ಹಿ ಅವಶಃ"-ದೇಹದ ಒಳಗಿರುವ ಜೀವ ದೇಹದ ಮೂಲಕ ಮನಸ್ಸಿನ ಮೂಲಕ, ಮಾತಿನ ಮೂಲಕ-ಕೆಲಸ ಮಾಡಿಸಲ್ಪಡುತ್ತದೆ. ಅದು ನಮ್ಮ ಸ್ವಾಧೀನದಲ್ಲಿರುವುದಿಲ್ಲ, ಅದು ಭಗವಂತನ ವಶ.
ಇಡೀ ವಿಶ್ವವೇ ಪ್ರಕೃತಿಯಿಂದ ಸೃಷ್ಠಿಯಾಗಿದೆ. ಅದರ ಮೂಲ ದ್ರವ್ಯ ಸತ್ವ-ರಜಸ್ಸು-ತಮಸ್ಸು. ಜೀವಕ್ಕೆ ಅದರದ್ದೇ ಆದ ಸ್ವಭಾವವಿರುತ್ತದೆ, ಅದಕ್ಕನುಗುಣವಾಗಿ ಪ್ರಕೃತಿಯ ಈ ತ್ರಿಗುಣಗಳ ಪ್ರಭಾವ ನಮ್ಮ ಮೇಲಾಗುತ್ತಿರುತ್ತದೆ. ಆದ್ದರಿಂದ ನಿಷ್ಕ್ರೀಯತೆ ಎನ್ನುವುದು ಅರ್ಥ ಶೂನ್ಯ. ನಾವು ಜೀವನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕರ್ತವ್ಯ ಶೀಲರಾಗಬೇಕು. ಅದರೊಂದಿಗೆ ಮಾನಸಿಕವಾಗಿ ಐಹಿಕ ಪ್ರಪಂಚದಿಂದ ಆಚೆಗಿನ ಸತ್ಯದ ಕಡೆ ನಮ್ಮ ಮನಸ್ಸು ಜಾಗೃತವಾಗಿರಬೇಕು. ಈ ಎಚ್ಚರದಿಂದ ಎಲ್ಲಾ ಕರ್ತವ್ಯ ಕರ್ಮಗಳನ್ನು ಮಾಡಬೇಕು. ನಿಷ್ಕ್ರೀಯತೆ ವೇದಾಂತವಲ್ಲ-ಕರ್ತವ್ಯಚ್ಯುತಿ ಅಧ್ಯಾತ್ಮವಲ್ಲ. ಭಗವಂತನ ಪ್ರಜ್ಞೆಯೊಂದಿಗೆ ನಿನ್ನ ಪಾಲಿನ ಕರ್ಮ ನೀನು ಮಾಡು. ಹೀಗೆ ಮಾಡಿದಾಗ ಕರ್ಮ ಮತ್ತು ಜ್ಞಾನ ಮಾರ್ಗಗಳು ಒಂದಕ್ಕೊಂದು ಪೂರಕವಾಗುತ್ತವೆ.
ಶ್ಲೋಕ - 06
ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಚರನ್ ।
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥೬॥
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥೬॥
ಈ ಶ್ಲೋಕದಲ್ಲಿ ಕೃಷ್ಣ ಒಂದು ಮುಖ್ಯವಾದ ವಿಚಾರವನ್ನು ಹೇಳಿದ್ದಾನೆ. ಸಾಮಾನ್ಯವಾಗಿ ಇಂದಿನ ಪ್ರಪಂಚದಲ್ಲಿ ಹೊರಗಿನ ವೇಷಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದನ್ನು ನಾವು ಕಾಣುತ್ತೇವೆ. ಮನಸ್ಸಿನಲ್ಲಿ ಎಲ್ಲಾ ಆಸೆ ಇಟ್ಟುಕೊಂಡು, ಯಾವುದೋ ಭಯದಿಂದ ಹೊರ ನೋಟಕ್ಕೆ ಸದಾಚಾರಸಂಪನ್ನರಂತೆ ಬದುಕುವವರಿದ್ದಾರೆ. ಕೃಷ್ಣ ಇದನ್ನು ಕಪಟ ಧಾರ್ಮಿಕತೆ ಎನ್ನುತ್ತಾನೆ. ನಾವು ಮೊದಲು ನಮ್ಮ ಆತ್ಮ ಸಾಕ್ಷಿಗೆ ವಂಚನೆ ಮಾಡದೆ ಬದುಕಬೇಕು. ಹೊರಗಿನ ಆಚಾರಕ್ಕಿಂತ ಮೊದಲು ಒಳಗಿನ ಆಚಾರಶುದ್ಧಿ ಮುಖ್ಯ. ಇದಿಲ್ಲದಿದ್ದರೆ ಎಂದೂ ಉದ್ಧಾರವಿಲ್ಲ. ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ ಡಂಭಾಚಾರಿ ಎನಿಸುತ್ತಾನೆ ಎಂದಿದ್ದಾನೆ ಕೃಷ್ಣ.
No comments:
Post a Comment